ಸಾಮಾಜಿಕ ಭಾಷಾವಿಜ್ಞಾನ

	ಆನ್ವಯಿಕ ಭಾಷಾವಿಜ್ಞಾನದ ಪ್ರಮುಖ ಶಾಖೆ. ಸಾಮಾಜಿಕ ಭಾಷಾವಿಜ್ಞಾನ (ಸೋಷಿಯೋ ಲಿಂಗ್ವಿಸ್ಟಿಕ್ಸ್) ಎಂಬ ಹೆಸರು ಪ್ರಚಾರಕ್ಕೆ ಬಂದದ್ದು 1952ರಲ್ಲಿ. ಈ ಹೆಸರನ್ನು ಮೊದಲು ಬಳಸಿದವನು ಹ್ಯಾವರ್ ಸಿ ಕ್ಯೂರಿ. ಭಾಷೆಯನ್ನು ಅದರ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅಗತ್ಯವನ್ನು ಈ ಶತಮಾನದ ಪೂರ್ವಾರ್ಧದಲ್ಲಿಯೇ ಭಾಷಾ ವಿಜ್ಞಾನಿಗಳು ಗ್ರಹಿಸಿದ್ದರು. ಇವರ ಗ್ರಹಿಕೆಯನ್ನು ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಮನೋವಿಜ್ಞಾನಿ ಗಳು ಬೆಂಬಲಿಸಿದರು. ಇದರ ಫಲವಾಗಿ ಭಾಷಾವಿಜ್ಞಾನದಲ್ಲಿ ಸಾಮಾಜಿಕ ಭಾಷಾವಿಜ್ಞಾನ ಎಂಬ ಹೊಸದೊಂದು ಶಾಖೆ ಕುಡಿಯೊಡೆಯಿತು. ಈ ಶಾಖೆಗೆ ಸೋಷಿಯೊಲಿಂಗ್ವಿಸ್ಟಿಕ, ಸೋಷಿಯಲ್ ನಜ ಲಿಂಗ್ವಿಸ್ಟಿಕ ಎಂಬ ಹೆಸರುಗಳು 1962ರ ವೇಳೆಯಲ್ಲಿ, ರಷ್ಯ ದೇಶದಲ್ಲಿ ಪ್ರಚಾರದಲ್ಲಿ ದ್ದವು. ಸೋಷಿಯೊಲಿಂಗ್ವಿಸ್ಟಿಕ್ಸ್ ಎಂ
ಬುದಕ್ಕೆ ಬದಲಾಗಿ ಸೋಷಿಯಾಲಜಿ ಆಫ್ ಲಾಂಗ್ವೇಜ್ ಎಂಬ ಹೆಸರನ್ನು ಬಳಕೆಗೆ ತರಲು ಜೆ.ಎ.ಫಿಶ್‍ಮನ್ ತುಂಬ ಪ್ರಯತ್ನ ಪಟ್ಟ; ಬ್ರೈಟ್, ಲ್ಯಾಬೋವ್ ಮೊದಲಾದವರು ಫಿಶ್‍ಮನ್‍ರ ಅಪೇಕ್ಷೆಗೆ ಒತ್ತಾಸೆಯಾಗಿ ನಿಂತರು. ಆದರೂ ಈವರೆಗೆ ಸೋಷಿಯೊ ಲಿಂಗ್ವಿಸ್ಟಿಕ್ಸ್ ಎಂಬ ಹೆಸರೇ ಪ್ರಪಂಚಾದ್ಯಂತ ಮನ್ನಣೆ ಪಡೆದಿದೆ.

	ಸಾಮಾಜಿಕ ಭಾಷಾವಿಜ್ಞಾನದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ವರ್ಷ 1964. ಸಾಮಾಜಿಕ ಭಾಷಾವಿಜ್ಞಾನಕ್ಕೆ ಭದ್ರ ಬುನಾದಿ, ಇದರ ಸಂಶೋಧನೆಗಳಿಗೆ ಪ್ರಾಪಂಚಿಕ ಮನ್ನಣೆ ದೊರೆತ ಕಾಲವಿದು. ಇದನ್ನು ದೊರಕಿಸಿಕೊಟ್ಟ ಕೀರ್ತಿ ಅಮೆರಿಕೆಯ ಭಾಷಾ ವಿಜ್ಞಾನಿಗಳಿಗೆ ಸಲ್ಲುವಂಥದು. ಇಂದಿಗೂ ಈ ಕ್ಷೇತ್ರದ ಉದ್ಗ್ರಂಥಗಳ ಲ್ಲೊಂದೆಂದು ಪರಿಗಣಿತವಾಗಿರುವ “ಡೆಲ್ ಹೈಮ್ಸ್‍ನ ಲ್ಯಾಂಗ್ವೇಜ್ ಇನ್ ಕಲ್ಚರ್ ಅಂಡ್ ಸೊಸೈಟಿ” ಎಂಬುದು ಬೆಳಕುಕಂಡದ್ದು 1964ರಲ್ಲೆ. ಇದು ಸಾಮಾಜಿಕ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಆದ್ಯ ಬರೆಹಗಳನ್ನು ಒಳಗೊಂಡಿರುವ ಕೃತಿ. ಪರಾಮರ್ಶನ ಸಾಮಗ್ರಿಯ ದೃಷ್ಟಿಯಿಂದ ಈ ಕೃತಿಯನ್ನು ಸಾಮಾಜಿಕ ಭಾಷಾವಿಜ್ಞಾನದ ಮೈಲುಗಲ್ಲೆಂದು ಕರೆಯಲಾಗಿದೆ. 1964ರಲ್ಲಿ ಸಾಮಾಜಿಕ ಭಾಷಾವಿಜ್ಞಾನವನ್ನು ಕುರಿತ ಮೊದಲ ಸಮ್ಮೇಳನ ನಡೆಯಿತು. ಅಮೆರಿಕದ ಲಾಸ್‍ಏಂಜಲ್ಸ್‍ನ ಕ್ಯಾಲಿಫೋರ್ನಿ ವಿಶ್ವವಿದ್ಯಾಲಯದಲ್ಲಿ ಈ ಸಮ್ಮೇಳನ ನಡೆಯಿತು. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಉತ್ಸಾಹಿಗಳಿಗಾಗಿ ವಿಲಿಯಮ್ ಬ್ರೈಟ್ ಅವರು ಏಳು ಹೊಸ ಆಯಾಮಗಳನ್ನು ಗುರುತಿಸಿಕೊಟ್ಟರು. ಇವೆಲ್ಲಕ್ಕಿಂತ ಮಿಗಿಲಾಗಿ ವಿಲಿಯಮ್ ಲ್ಯಾಬೊನ್‍ನ “ದಿ ಸೋಷಿಯಲ್ ಸ್ಟ್ರ್ಯಾಟಿಫಿಕೇಶನ್ ಆಫ್ ಇಂಗ್ಲಿಷ್ ಇನ್ ನ್ಯೂಯಾರ್ಕ್ ಸಿಟಿ” ಎಂಬ ಆಚಾರ್ಯ ಸಂಶೋಧನ ಕೃತಿ 1964ರಲ್ಲಿ ಮಹಾನಿಬಂಧದ ರೂಪದಲ್ಲಿ ಕಾಣಿಸಿಕೊಂಡಿತು. ಈ ಎಲ್ಲ ಕಾರಣಗಳಿಂದ ಸಾಮಾಜಿಕ ಭಾಷಾವಿಜ್ಞಾನದ ಇತಿಹಾಸದಲ್ಲಿ 1964 ಅತ್ಯಂತ ಚಿರಸ್ಮರಣೀಯ ವರ್ಷ. ಅಮೆರಿಕ ಸರ್ಕಾರದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆ ಸಾಮಾಜಿಕ ಭಾಷಾವಿಜ್ಞಾನ ಬೆಳೆಯಲು ಇತ್ತ ಆರ್ಥಿಕ ನೆರವು ಪ್ರಶಂಸಾರ್ಹವಾದುದು. ಸಾಮಾಜಿಕ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಸಂಶೋಧನಾ ಯೋಜನೆ ಗಳಿಗೆ ಮುಕ್ತವಾಗಿ ಸರ್ಕಾರ ಮಾಡಿದ ಧನಸಹಾಯದಿಂದ ಅನೇಕ ಮೌಲಿಕ ಕೃತಿಗಳು ಪ್ರಕಟವಾದವು. ಲ್ಯಾಬೊವ್, ಫಿಶ್‍ಮನ್, ಶೂಯ್, ಉಲ್‍ಫ್ರಾಮ್, ರಿಲೆ, ಗ್ರಿಮ್‍ಷಾ ಮೊದಲಾದ ಸಂಶೋಧಕರು ಈ ನೆರವಿನಿಂದ ಉಪಕೃತರಾದರು. ಸಾಮಾಜಿಕ ಭಾಷಾವಿಜ್ಞಾನ ಕ್ಷೇತ್ರವನ್ನು ಫಲವತ್ತಾಗಿಸಿದರು. ಇವರೇ ಅಲ್ಲದೆ ಡೆಲ್‍ಹೈಮ್ಸ್, ವೆಯ್‍ನ್ನ್‍ರಿಚ್, ಫಗ್ರ್ಯೂಸನ್, ಲೀಬರ್‍ಸನ್, ಬರ್ನ್‍ಸ್ಟೈನ್, ಪ್ರೈಡ್, ಹಡ್ಸನ್, ಟ್ರಡ್ಗಿಲ್ ಈ ಕ್ಷೇತ್ರದ ಪ್ರಾತಃಸ್ಮರಣೀಯರಾಗಿದ್ದಾರೆ. ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆಯೂ ಸಾಮಾಜಿಕ ಭಾಷಾವಿಜ್ಞಾನದಲ್ಲಿ ದುಡಿದಿರುವ ಗಣ್ಯರಿದ್ದಾರೆ. ವಿಲಿಯಮ್‍ಬ್ರೈಟ್, ಜಾನ್ ಜೆ ಗುಂಪರ್ಜ್, ಘಾಟ್ಗೆ, ಪಟ್ನಾಯಕ್, ಕತ್ರೆ, ಕಾಲೇಲ್‍ಕರ, ಕರುಣಾಕರನ್, ಎ.ಬಾಪೂಜಿ ಮೊದಲಾದ ಮಹನೀಯರನ್ನು ಇಲ್ಲಿ ನೆನೆಯಬಹುದು.

	ಸಮಾಜ ಮತ್ತು ಸಂಸ್ಕøತಿಗಳಲ್ಲಿ ಮಾನವ ಭಾಷೆ ಹೇಗೆ ಹೆಣೆದು ಕೊಂಡಿದೆ ಎಂಬುದನ್ನು ವಿಶ್ಲೇಷಿಸುವ ಕೆಲಸ ಸಾಮಾಜಿಕ ಭಾಷಾ ವಿಜ್ಞಾನದ ಮುಖ್ಯ ಗುರಿ. ಭಾಷೆಗೆ ಒಂದು ರಚನೆ, ವ್ಯವಸ್ಥೆ ಇರುವಂತೆ ಸಮಾಜಕ್ಕೂ ಇದೆ ಎಂಬುದು ಸಾಮಾಜಿಕ ಭಾಷಾವಿಜ್ಞಾನಿಗಳ ತಿಳಿವಳಿಕೆ. ಆದುದ ರಿಂದಲೇ ಸಾಮಾಜಿಕ ಮತ್ತು ಸಾಂಸ್ಕøತಿಕ ಅಂಶಗಳು ಭಾಷಾರಚನೆಯಲ್ಲಿ ಮಿಳಿತವಾಗಿರುವ ಬಗೆಯನ್ನು ಒರೆಹಚ್ಚುವುದೇ ಈ ಕ್ಷೇತ್ರದ ತಜ್ಞರ ಕೆಲಸ. ಭಾಷೆಯ ರಚನೆಯಲ್ಲಿ ಧ್ವನಿ, ಪದ, ವಾಕ್ಯ, ಅರ್ಥ ಮುಂತಾದ ಅಂಶಗಳು ಇರುವಂತೆ, ಸಮಾಜದ ರಚನೆಯಲ್ಲಿ ಜಾತಿ, ವರ್ಗ, ಲಿಂಗ, ವಿದ್ಯೆ, ವಯಸ್ಸು ಇತ್ಯಾದಿ ಅಂಶಗಳು ಇರುತ್ತವೆ. ಈ ಅಂಶಗಳು ಭಾಷೆಯಲ್ಲಿಯ ರಚನಾತ್ಮಕ ಅಂಶಗಳ ಬದಲಾವಣೆಗೆ ಕಾರಣವಾಗುತ್ತವೆ. ಈ ಬದಲಾವಣೆಯನ್ನು ತಿಳಿಯಬೇಕಾದರೆ ಭಾಷಿಕ ರಚನಾಂಶಗಳನ್ನು ಸಾಮಾಜಿಕ ರಚನಾಂಶಗಳೊಡನೆ ಪರಸ್ಪರ ಸಂಬಂಧ ಕಲ್ಪಿಸಿ, ಅಧ್ಯಯನ ನಡೆಸಬೇಕು. 

	“ಭಾಷಾವಿಜ್ಞಾನದ ಯಾವ ಒಂದು ಶಾಖೆ ಭಾಷೆಯಲ್ಲಿ ಹುದುಗಿರುವ ಸಾಮಾಜಿಕ ಅಂಶಗಳ ವಿವರಗಳನ್ನು ಒದಗಿಸುತ್ತದೆಯೋ ಅದೇ ಸಾಮಾಜಿಕ ಭಾಷಾವಿಜ್ಞಾನ” ಎಂಬುದು ಹಾ.ಮಾ.ನಾಯಕರ ಅಭಿಪ್ರಾಯ. “ಭಾಷಾವಿಜ್ಞಾನದ ಯಾವ ಭಾಗ ಭಾಷೆಯನ್ನು ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಬಂಧಿಯಾಗಿ ನೋಡುತ್ತದೆಯೋ ಅದೇ ಸಾಮಾಜಿಕ ಭಾಷಾವಿಜ್ಞಾನ” ಎಂದು ಪೀಟರ್ ಟ್ರಡ್ಗಿಲ್ ವ್ಯಾಖ್ಯಾನಿಸಿದ್ದಾನೆ.

	ಸಾಮಾಜಿಕ ಭಾಷಾವಿಜ್ಞಾನ ಅನೇಕ ಸಾಮಾಜಿಕ ವಿಜ್ಞಾನಗಳ ವಿಷಯ, ವಿಧಾನ ಮತ್ತು ಶೋಧನೆಗಳಿಂದ ಉಪಕೃತವಾಗಿದೆ. ಅದರಲ್ಲೂ ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತು ಉಪಭಾಷಾವಿಜ್ಞಾನಗಳ ಋಣಭಾರ ಇದಕ್ಕೆ ಹೆಚ್ಚು. ಇವು ಮೂರೂ ಸೈದ್ಧಾಂತಿಕವಾಗಿ ಮುಪ್ಪುರಿ ಗೊಂಡಂತೆ ಸಾಮಾಜಿಕ ಭಾಷಾವಿಜ್ಞಾನ ಭಾಸವಾಗುತ್ತದೆ. ಹೀಗೆ ಅಂತರ್ ಶಿಸ್ತುಗಳ ಒಂದು ಸುಸಂಗತ ವಿಷಯವಾಗಿ ಸಾಮಾಜಿಕ ಭಾಷಾವಿಜ್ಞಾನ ಬೆಳೆದು ನಿಂತಿದೆ. ನ್ಯೂಯಾರ್ಕ್ ನಗರದ ಆಡುಭಾಷೆ ಇಂಗ್ಲಿಷ್‍ನ ಸಾಮಾಜಿಕ ಸ್ತರ ಅಧ್ಯಯನ ನ್ಜಾಮಲ್ ಭಾಷೆಯ ಬಂಧುತ್ವ ಸೂಚಕ ಪದಗಳ ಅಧ್ಯಯನ ಮತ್ತು ಹಾಲೆಂಡ್‍ನಿಂದ ಜರ್ಮನಿವರೆಗೆ ನಡೆದಿರುವ ಪ್ರಾದೇಶಿಕ ಭಾಷಾ ಅಧ್ಯಯನಗಳು ಹಾಗೂ ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತು ಉಪಭಾಷಾವಿಜ್ಞಾನಗಳು ಸಾಮಾಜಿಕ ಭಾಷಾವಿಜ್ಞಾನಕ್ಕೆ ಸೈದ್ಧಾಂತಿಕವಾಗಿ ಕೊಟ್ಟಿರುವ ಕೊಡುಗೆಗೆ ಉತ್ತಮ ನಿದರ್ಶನಗಳು.

	ಇಂದು ಸಾಮಾಜಿಕ ಭಾಷಾವಿಜ್ಞಾನ ಆನ್ವಯಿಕ ಭಾಷಾವಿಜ್ಞಾನದ ಒಂದು ಪ್ರಮುಖ ವಿಭಾಗ. ಭಾಷೆಯನ್ನು ಆಧುನಿಕ ಸವಲತ್ತುಗಳಿಗೆ ಅಳವಡಿಸಿಕೊಳ್ಳಲು ಯತ್ನಿಸಿದಂತೆಲ್ಲ ಭಾಷಾವಿಜ್ಞಾನಿಗಳಿಗೆ ಫಲಾಫಲ ನಿರ್ಧಾರಕ್ಕೆ ಸಾಮಾಜಿಕ ಭಾಷಾವಿಜ್ಞಾನಕ್ಷೇತ್ರ ಅನಿವಾರ್ಯವಾಗಿದೆ. ಪ್ರಗತಿಪಥದಲ್ಲಿ ಕ್ರಮಿಸುತ್ತಿರುವ ಯಾವುದೇ ರಾಷ್ಟ್ರದ ಭಾಷಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಭಾಷಾವಿಜ್ಞಾನದ ಪಾತ್ರ ಮಹತ್ತ್ವದ್ದು. ಅಲ್ಪಸಂಖ್ಯಾತ, ಬಹುಸಂಖ್ಯಾತರ ಭಾಷಿಕ ಸಮಸ್ಯೆಗಳನ್ನು ಪರಿಶೀಲಿಸುವಲ್ಲಿ, ಶಿಕ್ಷಣ ಮಾಧ್ಯಮವಾಗಿ ಒಂದು ಭಾಷೆಯನ್ನು ನಿಯೋಜಿಸುವ ಸಂದರ್ಭದಲ್ಲಿ ಭಾಷಾ ಯೋಜನೆ ಶಿಷ್ಟೀಕರಣ ಲಿಪಿ ಸುಧಾರಣೆ ಮುಂತಾದ ಭಾಷಿಕ ಚಟುವಟಿಕೆಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲಿ ಸಾಮಾಜಿಕ ಭಾಷಾವಿಜ್ಞಾನದ ನೆರವು ಅಗತ್ಯ. ಹೀಗಾಗಿ ಭಾಷಾವಿಶ್ಲೇಷಣೆಯಲ್ಲಿ ಸೈದ್ಧಾಂತಿಕ ನಿಲುವುಗಳಿಂದಷ್ಟೇ ಅಲ್ಲ ಆನ್ವಯಿಕವಾಗಿ ಕೂಡ ತಾಂತ್ರಿಕ ನೈಪುಣ್ಯತೆಯಿಂದಲೂ ಸಾಮಾಜಿಕ ಭಾಷಾವಿಜ್ಞಾನ ಇಂದು ಭಾಷಾವಿಜ್ಞಾನ ಕ್ಷೇತ್ರಕ್ಕೆ ಒಂದು ಅಪೂರ್ವ ಕೊಡುಗೆ.	
(ಎಸ್.ಜಿ.) 

	ಭಾಷೆಗಳ ಸಂಪರ್ಕ-ಸಾಮಾಜಿಕ ಮುಖ: ಭಾಷೆಗಳ ಸಂಪರ್ಕವನ್ನು ಕುರಿತು ಮಾತನಾಡುವಾಗ ಮನಸ್ಸಿನಲ್ಲಿ ಮೂಡಬೇಕಾದ ಚಿತ್ರ ಬೇರೆಬೇರೆ ಬಣ್ಣಗಳಿಂದ ಕೂಡಿದ ಅಚ್ಚುಕಟ್ಟಾಗಿರುವ ಭೂಪಟದ್ದಲ್ಲ; ಎರಡು ಅಥವಾ ಹೆಚ್ಚಿನ, ಹೆಚ್ಚು ಕಡಮೆ ಭಿನ್ನಭಿನ್ನವಾಗಿರುವ ಸಾಂಕೇತಿಕ ವ್ಯವಸ್ಥೆಗಳು ಮನೆಮಾಡಿರುವ ಏಕಮಾತ್ರ ನರವ್ಯವಸ್ಥೆಯಿದು-ಸಂಕ್ಷಿಪ್ತವಾಗಿ ಹೇಳುವುದಾದರೆ ದ್ವಿಭಾಷಿ (ಅಥವಾ ಬಹುಭಾಷಿ) (ವ್ಯಕ್ತಿಯದು) ಭಾಷಾಸಂಪರ್ಕದ ಮನೋವೈಜ್ಞಾನಿಕ ಹಾಗೂ ಭಾಷಾವೈಜ್ಞಾನಿಕ ಮುಖಗಳ ವಿವೇಚನೆಗೆ (ನೋಡಿ-ದ್ವಿಭಾಷಿತ್ವ) ದ್ವ್ಯೋಪಭಾಷಿತ್ವವು ದ್ವಿಭಾಷಿತ್ವದ ಒಂದು ವಿಶೇಷ ಪ್ರಕಾರ. ಪ್ರಕೃತ ಪ್ರತಿಸ್ಪರ್ಧಿಭಾಷಾ ವ್ಯವಸ್ಥೆಗಳು ಅಕ್ಕಪಕ್ಕದ ಕಾಲಿಕವಿಕಾರಗಳಾಗಿದ್ದರೆ, ಅಂತಹ ಪರಿಸ್ಥಿತಿಯು ಭಾಷಾಪರಿವರ್ತನೆ ಎನ್ನಿಸಿಕೊಳ್ಳುತ್ತದೆ; ಇವುಗಳ ದೀರ್ಘಕಾಲಾಂತರ ದಿಂದಾಗಲಿ ಸಾಮಾಜಿಕ ಅಥವಾ ಭೌಗೋಳಿಕ ಕಾರಣಗಳಿಂದಾಗಲಿ ಉಂಟಾದ ವಿಕಾರಗಳಾಗಿದ್ದಾಗ ಮಾತ್ರ ಅಥವಾ ಭಿನ್ನಭಿನ್ನ ಭಾಷೆಗಳಾಗಿದ್ದಾಗ ಮಾತ್ರ ಭಾಷಾಸಂಪರ್ಕ ಎಂಬ ಮಾತನ್ನು ಈ ಪದದ ವಿಶಾಲಾರ್ಥದಲ್ಲಿ ಪ್ರಯೋಗಿಸಲಾಗುತ್ತದೆ.

	ಇಲ್ಲಿ ಕೇವಲ ಎರಡು ಭಾಷಾವ್ಯವಸ್ಥೆಗಳ ಸಂಪರ್ಕವನ್ನು ಪರಿಶೀಲಿಸಿ ದರೆ ಸಾಕು (ಬಹುಭಾಷಾಸಂಪರ್ಕವು ಇದರ ವಿಸ್ತøತಪ್ರಕಾರವಷ್ಟೆ). ಈ ಎರಡು ಭಾಷೆಗಳನ್ನು ಕ ಮತ್ತು ಗ ಎಂದು ಕರೆಯೋಣ. ಈ ಎರಡು ಭಾಷೆಗಳಿಗೂ ಸಂಪರ್ಕವುಂಟಾಗುವ ಸಂದರ್ಭದಲ್ಲಿ ಕಂಡು ಬರುವುದು: (ಎ) ಕ ವನ್ನು ಸ್ವಭಾಷೆಯನ್ನಾಗಿಯೂ ಗ ವನ್ನು ದ್ವಿತೀಯ ಭಾಷೆಯನ್ನಾಗಿಯೂ ಉಳ್ಳ ಒಬ್ಬ ದ್ವಿಭಾಷಿ, (ಬಿ) ಕ ವನ್ನು ಸ್ವಭಾಷೆ ಯಾಗುಳ್ಳ, ಗ ಬಾರದ, ಮೇಲೆ ಹೇಳಿದ ದ್ವಿಭಾಷಿಯೊಡನೆ ಪರಸ್ಪರ ವ್ಯವಹಾರವುಳ್ಳ ಒಬ್ಬ ವ್ಯಕ್ತಿ, (ಸಿ) ಗ ವನ್ನು ಸ್ವಭಾಷೆಯಾಗುಳ್ಳ, ಕ  ಬಾರದ, ಮೇಲೆ ಹೇಳಿದ ದ್ವಿಭಾಷಿಯೊಡನೆ ಪರಸ್ಪರ ವ್ಯವಹಾರವುಳ್ಳ ಒಬ್ಬ ವ್ಯಕ್ತಿ. ಈ ಒಂದು ಸ್ಥಿತಿಯಿಂದುಂಟಾಗಬಹುದಾದ ಪರಿಣಾಮಗಳು: 
	1. ದ್ವಿಭಾಷಿಯ ಕ ಭಾಷಾಪ್ರಯೋಗವು ಆತನ ಗ ಭಾಷಾಜ್ಞಾನದ ಪ್ರಭಾವದಿಂದ ಬದಲಾಗುವುದು. 
	2. ದ್ವಿಭಾಷಿಯ ಗ ಭಾಷಾಪ್ರಯೋಗವು ಆತನ ಕ ಭಾಷಾಜ್ಞಾನದ ಪ್ರಭಾವದಿಂದ ಬದಲಾಗುವುದು. 
	3. ಬಿ-ಯಲ್ಲಿ ಹೇಳಿದ ವ್ಯಕ್ತಿಯ ಕ ಭಾಷಾಪ್ರಯೋಗವು ದ್ವಿಭಾಷಿಯ ಬದಲಾದ ಕ ಭಾಷಾ ಪ್ರಯೋಗದ ಪ್ರಭಾವದಿಂದ ಬದಲಾಗುವುದು.
	4. ಸಿ ಯಲ್ಲಿ ಹೇಳಿರುವ ವ್ಯಕ್ತಿಯ ಗ ಭಾಷಾ ಪ್ರಯೋಗವು ದ್ವಿಭಾಷಿಯ ಬದಲಾದ ಗ ಭಾಷಾ ಪ್ರಯೋಗದ ಪ್ರಭಾವದಿಂದ ಬದಲಾಗುವುದು. ಭಾಷಾ ವ್ಯತ್ಯಯದ ಈ ನಾಲ್ಕು ಅವಸ್ಥಾಂತರಗಳನ್ನು ಕ್ರಮವಾಗಿ ಸ್ವೀಕರಣ ಪರಭಾಷಾಭ್ರಂಶ (ಫಾರಿನ್ ಇಂಪರ್‍ಫೆಕ್ಷನ್) ಸ್ವೀಕರಣದ ಪ್ರಸಾರ, ಪರಭಾಷಾಭ್ರಂಶದ ಪ್ರಸಾರ ಎಂದು ಕರೆಯಬಹುದು. ಪ್ರಕೃತ ಭಾಷಿಕ ಸಮಾಜಗಳೆಡರಲ್ಲೂ ದ್ವಿಭಾಷಿಗಳಿದ್ದು ಸಂಪರ್ಕವು ಉಭಯ ಪಾಶ್ರ್ವಿಕವಾಗಿದ್ದರೆ ಎರಡೂ ಭಾಷೆಗಳು ನಾಲ್ಕು ಕಡೆಗಳಲ್ಲಿ ಪ್ರಭಾವಿತವಾಗಬಹುದು.	*

ಒಬ್ಬನೇ ವ್ಯಕ್ತಿ ಕಲಿತ ಎರಡು ಪರಭಾಷೆಗಳ ವ್ಯತ್ಯಯದ ಪರಿಣಾಮ ಗಳೇನಾಗಬಹುದು ಎಂಬುದು ತತ್ತ್ವತಃ ಕುತೂಹಲಜನಕವಾಗಿದ್ದರೂ ಸಾಮಾಜಿಕವಾಗಿ ಅದಕ್ಕೆ ಅಷ್ಟು ಪ್ರಾಮುಖ್ಯವಿಲ್ಲ. ಮೊದಲಿಗೆ ಭಿನ್ನವಾಗಿ ರುವ ಎರಡು ಭಾಷೆಗಳು ಏಕೀಭವಿಸುವುದನ್ನೇ ಭಾಷಾ ವ್ಯತ್ಯಯವೆನ್ನ ಬಹುದು. ಸಾಕಷ್ಟು ದ್ವಿಭಾಷಿಗಳ ಸಮೂಹಕ್ಕೇ ಸಾಮಾನ್ಯವಾಗುವುದರಿಂದ ಅಥವಾ ಇತರರಿಗೂ ಪ್ರಸಾರದ ಮೂಲಕ ಹಬ್ಬುವುದರಿಂದ ಅಥವಾ ಈ ಎರಡೂ ಕಾರಣಗಳಿಂದ ಇದು ಸಾಮಾಜಿಕ ಭಾಷಿಕ ಪ್ರಾಮುಖ್ಯ ಪಡೆಯುತ್ತದೆ.

	ದ್ವಿಭಾಷಿತ್ವವನ್ನು ಮೊದಲಿಗೆ ಉಂಟುಮಾಡುವ ಅಂಶಗಳು ಯಾವುವು, ಯಾವ ಯಾವ ಅಂಶಗಳು ಸ್ವೀಕರಣ, ಪರಭಾಷಾಭ್ರಂಶಗಳಿಗೂ ಅವುಗಳ ಪ್ರಸಾರಕ್ಕೂ ಅನುಕೂಲವೂ ಅಥವಾ ಪ್ರತಿಕೂಲವೂ ಆಗಿವೆ ಎಂಬ ಪ್ರಶ್ನೆಗಳೇಳುತ್ತವೆ. ವ್ಯತ್ಯಯವು ಎಷ್ಟರಮಟ್ಟಿಗೆ ನಡೆದಿದೆ ಎಂಬುದನ್ನು ಅಳೆಯುವುದು ವ್ಯಾವಹಾರಿಕವಾಗಿ ಅಸಾಧ್ಯ. ದಾತೃಭಾಷೆಯಿಂದ ರೂಪಗಳನ್ನು ಇಡಿಯಾಗಿ ಎತ್ತಿಕೊಂಡು ಅವುಗಳ ಧ್ವನ್ಯರ್ಥಗಳನ್ನು ಉಚಿತವಾಗಿ ಮಾರ್ಪಡಿಸಿಕೊಳ್ಳುವುದರಿಂದ ಹಿಡಿದು; ಅರ್ಥದ ದೃಷ್ಟಿಯಿಂದಲೂ ಒಮ್ಮೊಮ್ಮೆ ಧ್ವನಿಯ ದೃಷ್ಟಿಯಿಂದಲೂ ದಾತೃಭಾಷೆಯ ರೂಪಗಳನ್ನು ಮಾದರಿಯಾಗಿಟ್ಟುಕೊಂಡು ಭಾಷಾಂತರಿತ ರೂಪಗಳ ನಿರ್ಮಾಣದ ಮೂಲಕ ಹಾದು (ಉದಾ: ಸಂಸ್ಕøತದ ಅಸ್ಪøಶ್ಯತಾ, ಎಂಬುದರ ಮಾದರಿಯ ಮೇಲೆ ಇಂಗ್ಲಿಷಿನ “ಅನ್‍ಟಚಬಿಲಿಟಿ”, ಇಂಗ್ಲಿಷಿನ ಸಾನೆಟ್ ಎಂಬುದರ ಮಾದರಿಯ ಮೇಲೆ ಮರಾಠಿಯ ಸುನೀತ್) ದಾತೃಭಾಷೆಯ ಒಟ್ಟು ರಚನೆಯ ಪರಿಣಾಮದಿಂದುಂಟಾದ ಪರಿವರ್ತನೆಗಳವರೆಗೂ (ಉದಾ: ಇಂಗ್ಲಿಷಿನಲ್ಲಿ ಮಾತನಾಡುವ ಕನ್ನಡಿಗ ಉಪಯೋಗಿಸುವ ಕನ್ನಡಧ್ವನಿಗಳೂ ಕನ್ನಡ ವ್ಯಾಕರಣಪ್ರಭಾವಿತ ರೂಪಗಳು) ಅದರ ವ್ಯಾಪ್ತಿಯಿದೆ. ಕೆಲವು ಸಂದರ್ಭಗಳಲ್ಲಿ ಈ ರೀತಿಯ ವ್ಯತ್ಯಯಗಳ ಶ್ರೇಣಿಯ ಪರಿಣಾಮವಾಗಿ ಪಾತ್ರಭಾಷೆಯಲ್ಲಿ ಒಂದು ವಿಶಿಷ್ಟಶೈಲಿಯ ನಿರ್ಮಾಣವೇ ಆಗಬಹುದು (ಉದಾ: ಕೇವಲ ಸಾಹಿತ್ಯದಲ್ಲಿ ಬಳಕೆಯಾಗುವ ಮಲಯಾಳಮ್ ಸಾಹಿತ್ಯದ ಮಣಿಪ್ರವಾಳ ಶೈಲಿ; ಪಶ್ಚಿಮ ಯುರೋಪಿನ ವೈಜ್ಞಾನಿಕ ಪದಕೋಶ-ಯಾವುದಾದರೂ ಒಂದು ಭಾಷೆಯಲ್ಲಿ ಗ್ರೀಕ್-ಲ್ಯಾಟಿನ್ ಭಾಷೆಗಳಿಂದ ಪದವೊಂದು ನಿರ್ಮಾಣವಾಯಿತೆಂದರೆ, ಶೀಘ್ರವಾಗಿ ಅದು ಇತರ ಭಾಷೆಗಳಿಗೂ ಹಬ್ಬಿಕೊಳ್ಳುವುದು, ಫೋನಿಮ್ ಎಂಬ ಪದದಂತೆ). ಪರಭಾಷಾಭ್ರಂಶ ಹಾಗೂ ಅದರ ಪ್ರಸಾರದ ವಿಚಾರವಾಗಿಯೂ ಈ ಮಾತು ಪದೇಪದೇ ಸತ್ಯವೆನ್ನಿಸುತ್ತದೆ (ಉದಾ: ದೂರಪ್ರಾಚ್ಯರಾಷ್ಟ್ರಗಳಲ್ಲಿ ವಾಣಿಜ್ಯಭಾಷೆಯಾಗಿರುವ ಪಿಜಿನ್ ಇಂಗ್ಲಿಷ್; ಭಾರತದ ಹರುಕುಮುರುಕು ಹಿಂದುಸ್ತಾನಿ, ಯಹೂದ್ಯರ ಯಿದ್ದಿಷ್-ಇದು ಅವರು ಬಳಸುವ ಜರ್ಮನ್ ಭಾಷೆಯ ಒಂದು ರೂಪ; ಪ್ರಾದೇಶಿಕ ವಾಸ್ತವಿಕತೆಯ ರಂಗನ್ನೀಯಲು ಲಲಿತ ಸಾಹಿತ್ಯದಲ್ಲಿ ಬಳಕೆಯಾಗುವ ಅನುಕರಣೋಪಭಾಷೆ).

	ಭಾಷೆಗಳ ಸಂಪರ್ಕ ಬಗೆಬಗೆಯ ಸಂದರ್ಭಗಳಲ್ಲಿ ಉಂಟಾಗ ಬಹುದು. (1) ಸಂಪರ್ಕ ಉಭಯ ಪಾಶ್ರ್ವಿಕವಾಗಿರಬಹುದು ಅಥವಾ ಏಕಪಾಶ್ರ್ವಿಕವಾಗಿರಬಹುದು (ಉದಾ: ಬ್ರಾಹ್ಮಣೇತರರೊಡನೆ ವ್ಯವಹರಿಸುವಾಗ ಅವರ ಉಪಭಾಷೆಯನ್ನೇ ಬ್ರಾಹ್ಮಣ ತುಳು-ಭಾಷಿಗಳು ಉಪಯೋಗಿಸುತ್ತಾರೆ; ಆದರೆ ಬ್ರಾಹ್ಮಣೇತರರು ಬ್ರಾಹ್ಮಣೋಪಭಾಷೆಯನ್ನು  ಉಪಯೋಗಿಸುವುದಿಲ್ಲ). (2) ದ್ವಿಭಾಷಿಯ ದ್ವಿತೀಯ ಭಾಷಾಜ್ಞಾನ ವ್ಯವಹಾರಸಮರ್ಥವಾಗಿರ ಬಹುದು ಅಥವಾ ಕೇವಲ ಅಭಿಪ್ರಾಯ ಗ್ರಹಣಸಮರ್ಥವಾಗಿರಬಹುದು (ಉದಾ: ಇಂಗ್ಲಿಷ್ ಭಾಷೆ ಗೊತ್ತಿರುವ ಅನೇಕ ಭಾರತೀಯರು). (3) ಅದು (ದ್ವಿತೀಯ ಭಾಷೆ) ಉದ್ದೇಶ ಪೂರ್ವಕವಾಗಿಯೋ (ಶಾಲೆಯಲ್ಲಿಯಂತೆ) ಅಥವಾ ಸ್ವಾಭಾವಿಕ ವಾಗಿಯೋ (ಮರಾಠೀ ವ್ಯಾಪಾರಿಯೊಬ್ಬ ಮುಂಬಯಿಯಲ್ಲಿ ಗುಜರಾತಿಯನ್ನು ಹೇಗೋ ಹಾಗೆ) ಕಲಿತುದಾಗಿರಬಹುದು. (4) ಪ್ರಕೃತಭಾಷೆಗಳ ಸಂಕೇತ ವ್ಯವಸ್ಥೆಗಳು ದೀರ್ಘಕಾಲಾಂತರದಿಂದಲೋ (ಉದಾ: ವ್ಯವಹಾರದಲ್ಲಿಲ್ಲದ ದೇವ ಭಾಷೆಯನ್ನು ಕಲಿಯುವಾಗ) ಅಥವಾ ಸಾಮಾಜಿಕ ಅಂತರದಿಂದಲೋ (ಉದಾ: ಒಂದೇ ಪ್ರದೇಶದಲ್ಲಿ ವಿದ್ಯಾವಂತರ ಶಿಷ್ಟ ಭಾಷೆಗೂ ಗ್ರಾಮ್ಯ ಭಾಷೆಗೂ ಉಂಟಾಗುವ ಸಂಪರ್ಕ) ಬೇರ್ಪಟ್ಟಿರಬಹುದು. ಸಂಬಂಧವಿರುವ ಉಪಭಾಷೆಗಳಾಗಿದ್ದು ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರಚುರವಾಗಿರಬಹುದು (ಇಂಥ ಸಂದರ್ಭಗಳಲ್ಲಿ ಸ್ಪಷ್ಟ ಸಂಪರ್ಕರೇಖೆಯ ಬದಲು ಕ್ರಮೇಣ ಒಂದರಲ್ಲೊಂದು ವಿಲೀನವಾಗುವ ನುಡಿಗಳು ಉದಿಸಬಹುದು) ಅಥವಾ ಐತಿಹಾಸಿಕವಾಗಿ ಭಿನ್ನವಾಗಿದ್ದು ಭೌಗೋಳಿಕ ಸಂಪರ್ಕವನ್ನು ಪಡೆದಿರಬಹುದು(ಉದಾ: ಸ್ಪಷ್ಟ ಸಂಪರ್ಕರೇಖೆಯಿರುವ ಕನ್ನಡ ಮರಾಠೀ ಭಾಷೆಗಳು; ಅಸ್ಪಷ್ಟ ಸಂಪರ್ಕರೇಖೆಯಿರುವ ಕನ್ನಡ ತುಳು ಭಾಷೆಗಳು) ಅಥವಾ ಪಡೆಯದಿರಬಹುದು (ಉದಾ: ಕನ್ನಡ ಮತ್ತು ಹಿಂದೀ). (5) ಈ ಎರಡು ಭಾಷೆಗಳ ಪೈಕಿ ಒಂದು ಮತ್ತೊಂದ ಕ್ಕಿಂತ ಪ್ರಭಾವಯುತ ವಾಗಬಹುದು ಅಥವಾ ಆಗದಿರಬಹುದು (ಉದಾ: ಭಾಷೆಯನ್ನಾಡುವವರ ಬಹುಸಂಖ್ಯೆ, ಸ್ಥಾನ ಗೌರವ ಪ್ರತಿಷ್ಠೆಗಳು, ಸಾಹಿತ್ಯ ಸಾಂಸ್ಕøತಿಕ ಪ್ರತಿಷ್ಠೆ, ವ್ಯವಹಾರೋಪಯೋಗಿತ್ವ ಮುಂತಾದ ಕಾರಣಗಳಿಂದ). (6) ಎರಡೂ ಅಥವಾ ಎರಡರಲ್ಲೊಂದು ವ್ಯತ್ಯಯವನ್ನು ತಡೆಗಟ್ಟಬಹುದು (ಅದನ್ನಾಡುವವರಿಗಿರುವ ಪ್ರತಿಷ್ಠೆಯ ಬಲ, ಸಂಪ್ರದಾಯಪ್ರೀತಿ, ದೇಶಪ್ರೇಮ, ದ್ವಿತೀಯ ಭಾಷೆಯನ್ನು ಕಲಿಯುವ ಇಚ್ಛೆ ಅಥವಾ ಅಗತ್ಯದ ಅಭಾವ ಮುಂತಾದ ಕಾರಣಗಳಿಂದ.

	ಭಾಷಾ ಸಂಪರ್ಕದ ಕೂಲಂಕಷ ಅಧ್ಯಯನ ಆರಂಭವಾಗಿದೆ. ಭಾಷಾ ಬೋಧನೆಗೂ ಭಾಷಾ ಯೋಜನೆಗೂ ಈ ಅಭ್ಯಾಸ ದಿಂದುಂಟಾಗುವ ಪ್ರಯೋಜನಗಳು ಸ್ವಯಂವೇದ್ಯವೇ ಆಗಿವೆ. ಮಾದರಿಗಾಗಿ ಕೆಲವು ಲಕ್ಷ್ಯಾತ್ಮಕ ಸಂದರ್ಭಗಳನ್ನು ನೋಡಿದರೆ ಸಾಕು, ಈ ಅಭ್ಯಾಸದ ವ್ಯಾಪ್ತಿ ಎಷ್ಟು ವಿಶಾಲವಾದುದೆಂಬ ಕಲ್ಪನೆ ಉಂಟಾಗುತ್ತದೆ. ಅತಿಪರಿಚಿತ ಸಂದರ್ಭವೆಂದರೆ, ಶೈಕ್ಷಣಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಹುಟ್ಟಿಸುವ ಎರಡು ಭಿನ್ನಭಾಷೆಗಳ ಗಡಿಯ ಪರಿಸ್ಥಿತಿ. ಉಪಭಾಷೆಗಳ ಸಂಪರ್ಕದ ಅಭ್ಯಾಸ ಇದುವರೆಗೂ ಮುಖ್ಯವಾಗಿ ಭಾಷಾಪರಿವರ್ತನೆ, ಭಾಷಾವಿಭಿಗ್ನೀಕರಣ ಮತ್ತು ಶಿಷ್ಟೋಪಭಾಷೆಗಳ ಪ್ರಸಾರಗಳನ್ನು ಗೊತ್ತುಹಚ್ಚುವ ವಿದ್ವಾಂಸರಿಂದ ನಡೆದಿದೆ. ಉದ್ದೇಶಪೂರ್ವಕವಾಗಿ ಭಾಷೆಯನ್ನು ಕಲಿಯುವುದು ಭಾಷಾಬೋಧಕನಿಗೆ ಹೇಗೋ ಹಾಗೆಯೇ ಕ್ಷೇತ್ರಕಾರ್ಯಕರ್ತನಿಗೂ (ಭಾಷಾವಿಜ್ಞಾನಿ, ಮಾನವವಿಜ್ಞಾನಿ, ಮಿಷನರಿ, ಆದಿವಾಸಿಗಳ ಹಿತಚಿಂತಕ ಅಧಿಕಾರಿ ಯಾರೇ ಆಗಿರಲಿ) ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಪಸಂಖ್ಯಾತಭಾಷೆಗಳು ಸಮರ ವಿಜಯದ ಪರಿಣಾಮವಾ ಗಿಯೋ (ಯುದ್ಧದಲ್ಲಿ ಗೆದ್ದವರೋ ಸೋತವರೋ ಅಲ್ಪಸಂಖ್ಯಾತರಾಗ ಬಹುದು), ನಿರಾಶ್ರಿತರು ವ್ಯಾಪಾರಿಗಳು, ಮತಪರಿವರ್ತಕರು ಮುಂತಾದವರು ವಲಸೆ ನಿಲ್ಲುವುದರ ಪರಿಣಾಮವಾಗಿಯೋ ದೂರೀಕರಣದ ಪರಿಣಾಮ ವಾಗಿಯೋ (ಉದಾ: ಮರಾಠೀ ಪ್ರದೇಶದಲ್ಲಿ ಉರ್ದು ಮಾತನಾಡುವ ಮುಸಲ್ಮಾನರು, ಇಂಗ್ಲಿಷ್ ಮಾತನಾಡುವ ಕ್ರೈಸ್ತರು) ಉದಿಸಬಹುದು. ಕಡೆಗಣಿಸಲಾಗದ ಸಂದರ್ಭವೆಂದರೆ, ಸಹಾಯಕ ಭಾಷೆಯೊಂದಕ್ಕೂ ಅದನ್ನು ಬಳಸುವವರ ಭಾಷೆಗೂ ಉಂಟಾಗುವ ಸಂಪರ್ಕ-ಆಧುನಿಕ ಪ್ರಪಂಚದಲ್ಲಿ ಇಂಗ್ಲಿಷ್, ಯುರೋಪಿನಲ್ಲಿ ರಾಯಭಾರಿಗಳೂ ಭೋಜನಕಾಲಪ್ರಿಯರೂ ಬಳಸುವ ಫ್ರೆಂಚ್, ದಕ್ಷಿಣ ಹಾಗೂ ಆಗ್ನೇಯ ಏಷ್ಯದಲ್ಲಿ ಸಂಸ್ಕøತ, ಭಾರತದ ಅನೇಕ ಪ್ರದೇಶಗಳ ಹರಕುಮುರುಕು ಹಿಂದಿ, ಯುರೋಪಿನ ಧಾರ್ಮಿಕ ಹಾಗೂ ವಿದ್ವತ್ ಕ್ಷೇತ್ರಗಳಲ್ಲಿ ಗ್ರೀಕ್-ಲ್ಯಾಟಿನ್, ಮಧ್ಯ ಹಾಗೂ ಆಗ್ನೇಯ ಏಷ್ಯದಲ್ಲಿ ಚೀನೀ- ಇವುಗಳಲ್ಲಿ ಒಂದೊಂದೂ ತನ್ನದೇ ಆದ ವಿಶಿಷ್ಟತೆಯಿಂದ ಕೂಡಿದ ಸಂದರ್ಭವಾಗಿದೆ. ಈ ಸಂದರ್ಭಗಳ ಮತ್ತು ಇಂಥ ಇತರ ಸಂದರ್ಭಗಳ ವೈಜ್ಞಾನಿಕ ಅಧ್ಯಯನ, ಭಾಷಾಸಂಪರ್ಕದಿಂದ ಉಂಟಾದ ಜನಪ್ರಿಯ ಅಪಕಲ್ಪನೆಗಳಿಂದಲೂ ಜನಪದ ದಂತಕಥೆಗಳಿಂದಲೂ ಪಾರಾಗ ಬೇಕಾಗಿದೆ.
								
(ಎ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ